ಮೂಡಿಗೆರೆ
	ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ನೈಋತ್ಯ ಭಾಗದಲ್ಲಿರುವ ಒಂದು ತಾಲ್ಲೂಕು ಮತ್ತು ಅದರ ಮುಖ್ಯಪಟ್ಟಣ. ಈ ತಾಲ್ಲೂಕನ್ನು ಪೂರ್ವದಲ್ಲಿ ಬೇಲೂರು, ಆಗ್ನೇಯದಲ್ಲಿ ಸಕಲೇಶಪುರ, ದಕ್ಷಿಣ ಮತ್ತು ನೈಋತ್ಯದಲ್ಲಿ ಬೆಳ್ತಂಗಡಿ, ಪಶ್ಚಿಮದಲ್ಲಿ ಕಾರ್ಕಳ, ಉತ್ತರದಲ್ಲಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಮತ್ತು ಚಿಕ್ಕಮಗಳೂರು ತಾಲ್ಲೂಕುಗಳು ಸುತ್ತುವರಿದಿದೆ. ಗೋಣಿಬೀಡು, ಬಣಕಲ್, ಬಾಳೂರು, ಮೂಡಿಗೆರೆ ಮತ್ತು ಕಳಸ ಈ ತಾಲ್ಲೂಕಿನ ಹೋಬಳಿಗಳು. ಗ್ರಾಮಗಳು 140. ವಿಸ್ತೀರ್ಣ 1,163.6 ಚಕಿಮೀ. ಜನಸಂಖ್ಯೆ 1,41,255 (2001).

	ಈ ತಾಲ್ಲೂಕು ಚಿಕ್ಕಮಗಳೂರು ಜಿಲ್ಲಿಯ ಮಲೆನಾಡು ಪ್ರದೇಶದಲ್ಲಿದ್ದು ಪರ್ವತಮಯವಾಗಿದೆ. ಪಶ್ವಿಮದ ಅಂಚಿನುದ್ದಕ್ಕೂ ಪಶ್ಚಿಮಘಟ್ಟಗಳ ಬೆಟ್ಟಶ್ರೇಣಿ ಇದೆ. ಇದರಲ್ಲಿ ಕುದುರೆಮುಖ (1.894 ಮೀ), ಬಲ್ಲಾಳರಾಯನದುರ್ಗ (1505 ಮೀ). ಎಪ್ಪತ್ತು ಮಂದಿಗುಡ್ಡ, ಶಿಸಲುಕುಡಿ, ಜೇನುಕಲ್ಲುಗುಡ್ಡ ಬಹು ಎತ್ತರದ ಶಿಖರಗಳು, ತಾಲ್ಲೂಕಿನ ಇತರ ಭಾಗಗಳೂ ಬಲುಮಟ್ಟಿಗೆ ಏರುತಗ್ಗಾಗಿದ್ದು ಕಣಿವೆ, ಕಮರಿಗಳು, ದಿಣ್ಣೆ ಬೆಟ್ಟಗಳಿಂದ ಕೂಡಿವೆ.

	ಈ ತಾಲ್ಲೂಕು ಬಲುಮಟ್ಟಿಗೆ ಧಾರವಾಡ ಶಿಲಾಶ್ರೇಣಿಯ ಪ್ರದೇಶ. ಕೆಲವು ಭಾಗಗಳಲ್ಲಿ ಕಬ್ಬಿಣದ ಅದುರು ಮತ್ತು ಗ್ರಾನೈಟುಗಳು ಹೇರಳವಾಗಿವೆ. ಕುದುರೆಮುಖ ಕಬ್ಬಿಣದ ಅದುರಿನ ಹರವು ಪ್ರಸಿದ್ಧವಾದುದು. ಕುದುರೆಗುಂಡಿ ಮತ್ತು ಬಾಳೆಗದ್ದೆ ಮೊದಲಾದ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಲ್ಲುಗಳನ್ನು ಹೇರಳವಾಗಿ ತೆಗೆಯಲಾಗುತ್ತದೆ. ಕೆಲವೆಡೆ ಮರಳು ಮತ್ತು ಜೇಡಿಮಣ್ಣು ಹೆಚ್ಚಾಗಿ ದೊರೆಯುತ್ತದೆ.

	ಜಲಸಂಪತ್ತು ಇಲ್ಲಿಯ ಪ್ರಮುಖ ಪ್ರಾಕೃತಿಕ ಸಂಪನ್ಮೂಲಗಳಲ್ಲೊಂದು. ಭದ್ರಾ ಮತ್ತು ಹೇಮಾವತಿ ಹುಟ್ಟುವುದು ಈ ತಾಲ್ಲೂಕಿನಲ್ಲಿ. ಹೇಮಾವತಿ ನದಿಗೆ ಕೊಟ್ಟಗೆಹಾರದ ಬಳಿ ಸೋಮಾವತಿ, ಮುಗ್ಗುರವಳ್ಳಿಯ ಬಳಿ ಬಕ್ಕಿಹಳ್ಳ, ಕೆಸವಳಲು ಕೂಡಿಗೆಯಲ್ಲಿ ಕಪಿಲ ಅಥವಾ ಕಡದಾಳು ಹಳ್ಳ ಹಾಗೂ ಉದುಸೆ ಬಳಿ ಬೆರಣಿ ಹಳ್ಳ ಮೊದಲಾದ ದೊಡ್ಡ ತೊರೆಗಳು ಕೂಡಿಕೊಳ್ಳುತ್ತವೆ. ತಾಲ್ಲೂಕಿನ ಉತ್ತರ ಮತ್ತು ಪೂರ್ವಭಾಗದ ಕಾಡುಗಳಲ್ಲಿ ಹರಿಯುವ ಅನೇಕ ತೊರೆಗಳು ಭದ್ರಾನದಿಯನ್ನು ಸೇರುತ್ತವೆ. ಇವಲ್ಲದೆ ಈ ತಾಲ್ಲೂಕಿನ ಬೆಟ್ಟಗುಡ್ಡಗಳಲ್ಲಿ ಅನೇಕ ಚಿಕ್ಕ ಹಳ್ಳಗಳೂ ಹರಿಯುವುವು. ಜೂನ್-ಸೆಪ್ಟೆಂಬರ್ ಶ್ರಾಯದಲ್ಲಿ ಅಧಿಕ ಮಳೆ, ಬೈರಾಪುರ ಎಸ್ಟೇಟ್ ಮತ್ತು ಕೊಟ್ಟಿಗೆಹಾರ ಈ ತಾಲ್ಲೂಕಿನ ಹೆಚ್ಚು ಮಳೆ ಬೀಳುವ ಪ್ರದೇಶಗಳು. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ಸುಮಾರು 2,500 ಮಿಮೀ.

	ಬೆಟ್ಟಗುಡ್ಡಗಳ ಮೇಲೆ ಸದಾ ಹಸಿರುಭರಿತ ಕಾಡುಗಳು ಕಂಡುಬರುತ್ತವೆ. ಈ ಕಾಡುಗಳಲ್ಲಿ ಕರ್ನಾಟಕದ ಕಾಡುಗಳಲ್ಲಿ ದೊರೆಯುವ ಎಲ್ಲ ಮರಗಳೂ ಬೆಳೆಯುತ್ತವೆ. ಅವುಗಳಲ್ಲಿ ಶ್ರೀಗಂಧ, ಹಲಸು, ತೇಗ, ಮತ್ತಿ, ದಬ್ಬೆ, ನಂದಿ, ಸಂಪಿಗೆ ಮೊದಲಾದವು ಮುಖ್ಯವಾದವು. ಇಲ್ಲಿಯ ಮೀಸಲು ಕಾಡುಗಳಲ್ಲಿ ಬಾಳೂರು, ಸಾರಗೂಡು, ಕುಂದೂರು, ಮುದ್ರೆಮನೆ ಮೊದಲಾದ ಮೀಸಲು ಅರಣ್ಯಗಳು ಮುಖ್ಯವಾದವು. ಇವಲ್ಲದೆ ಪಶ್ಚಿಮ ಘಟ್ಟದ ಉದ್ದಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದಿನಲ್ಲಿ ಅರಣ್ಯ ಪ್ರದೇಶವಿದೆ. ಅಲ್ಲಲ್ಲಿ ನೂರಾರು ಎಕರೆಗಳಷ್ಟು ಈಚಲು ಗಿಡಗಳ ಹರವುಗಳನ್ನು ಕಾಣಬಹುದು.

	ಮಲೆನಾಡಿನ ಕೆಲವೆಡೆಗಳಲ್ಲಿಯಂತೆ ಇಲ್ಲಿಯ ಪ್ರಾಣಿ ಸಂಪತ್ತೂ ಹೇರಳವಾಗಿದೆ. ಕಾಡುಗಳಲ್ಲಿ ಆನೆ, ಹುಲಿ, ಹಂದಿ, ಕಾಡೆಮ್ಮೆ, ಸಾರಗ, ಕಡವೆ ಮೊದಲಾದ ಪ್ರಾಣಿಗಳಿವೆ. ಆದರೆ ಕಾಫಿ ಮತ್ತು ಏಲಕ್ಕಿ ತೋಟಗಳ ಸಾಗುವಳಿಯಿಂದ, ಬೇಟೆ ಮತ್ತು ಕಾಡು ಕಡಿಯುವುದರಿಂದಾಗಿ ಈಗ ಪ್ರಾಣಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

	ಬತ್ತ ಇಲ್ಲಿಯ ಮುಖ್ಯ ಆಹಾರ ಬೆಳೆ. ಕೆಲವೆಡೆ ರಾಗಿಯನ್ನೂ ಸ್ವಲ್ಪಮಟ್ಟಿಗೆ ಬೆಳೆಸುವರು. ಮಳೆಯ ನೀರೇ ಮುಖ್ಯ ಆಧಾರ. ಈ ತಾಲ್ಲೂಕಿನಲ್ಲಿ ಕಾಫಿ ಪ್ಲಾಂಟೇಷನ್ನುಗಳು ವ್ಯಾಪಕವಾಗಿವೆ. ಇಲ್ಲಿ ಅರ್ಯಾಬಿಕ ಮತ್ತು ಆಧುನಿಕ ಆಯ್ಕೆ ತಳಿಗಳ ಜತೆಗೆ ರೋಬಸ್ಟ ಕಾಫಿಯನ್ನು ಹೆಚ್ಚಾಗಿ ಬೆಳೆಸುತ್ತಾರೆ. ಈ ತಾಲ್ಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಕಳಸದ ಸುತ್ತಮುತ್ತ ಅಡಿಕೆ ಬೆಳೆಸುತ್ತಾರೆ. ಅಲ್ಲಿಯೇ ಕೆಲವು ಟೀ ತೋಟಗಳೂ ಇವೆ. ಸ್ವಲ್ಪ ಪ್ರಮಾಣದಲ್ಲಿ ಮೆಣಸನ್ನೂ ಬೆಳಸಲಾಗುತ್ತಿದೆ. ಏಲಕ್ಕಿ ಈ ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿತ್ತು. ಆದರೆ ಕೆಲವು ದಶಕಗಳಿಂದ ಮಳೆ ಕಡಿಮೆಯಾದುದರಿಂದ ಮತ್ತು ಆಧುನಿಕ ಕಾಫಿ ಸಾಗುವಳಿ ಜನಪ್ರಿಯವಾದುದರಿಂದ ಏಲಕ್ಕಿ ಬೆಳೆಯುವ ಪ್ರದೇಶ ಕ್ರಮೇಣ ಕಡಿಮೆಯಾಗುತ್ತಿದೆ. ಏಲಕ್ಕಿಗೆ ಇರುವ ಅನಿಶ್ಚಿತ ಬೆಲೆಯೂ ಇದಕ್ಕೆ ಒಂದು ಕಾರಣ. ಆದರೂ ಇಂದು ಏಲಕ್ಕಿ ಸಾಗುವಳಿಯನ್ನು ಆಧುನಿಕ ರೀತಿಯಲ್ಲಿ ನಡೆಸುವ ಹೊಸ ಪ್ರಯತ್ನಗಳು ಕಂಡುಬರುತ್ತಿವೆ. ಮೂಡಿಗೆರೆ ಕೈಮರದ ಬಳಿ ಕೃಪಿ ವಿಶ್ವವಿದ್ಯಾಲಯ ಸ್ಥಾಪಿಸಿರುವ ಪ್ರಾದೇಶಿಕ ಏಲಕ್ಕಿ ಸಂಶೋಧನಾ ಕೇಂದ್ರವಿದ್ದು ಈ ಬೆಳೆಯ ಸಾಗುವಳಿಗೆ ಸಹಕಾರಿಯಾಗಿದೆ.

	ಈ ತಾಲ್ಲೂಕಿನಲ್ಲಿ ದೊಡ್ಡ ಕೈಗಾರಿಕೆಗಳಿಲ್ಲ. ಕೆಲವೆಡೆ ಅಕ್ಕಿ ಗಿರಣಿಗಳಿದೆ. ಮೂಡಿಗೆರೆಯ ಬಳಿ ಮರ ಕೊಯ್ಯುವ ಕೆಳಗೂರಿನಲ್ಲಿ ಟೀ ಹದ ಮಾಡುವ ಕಾರ್ಖಾನೆಗಳು ಇವೆ. ಬಿದಿರಿನ ವಸ್ತುಗಳನ್ನು ತಯಾರಿಸುವುದು. ಗಾಡಿ ಕೂಡಿಸುವುದು. ಕಬ್ಬಿಣದ ಕೆಲಸ. ಮಡಕೆ ಮಾಡುವುದು. ವಾಹನಗಳ ದುರಸ್ತು ಮಾಡುವುದು ಮೊದಲಾದ ಗೃಹಕೈಗಾರಿಕೆಗಳಿವೆ. ಕುದುರೆಗುಂಡಿ ಮತ್ತು ಬಾಳೆಗದ್ದೆ ಸ್ಥಳಗಳಲ್ಲಿ ಕಟ್ಟಡಕ್ಕೆ ಬಳಸುವ ಕಲ್ಲುಗಳನ್ನು ತೆಗೆಯುವರು. 1976ರಿಂದ ಕಾರ್ಯಾಚರಣೆಯಲ್ಲಿರುವ ಕುದುರೆಮುಖ ಕಬ್ಬಿಣ ಅದುರು ಯೋಜನೆ ಈ ತಾಲ್ಲೂಕಿಗೇ ಮಹುತ್ತ್ವದ್ದು. ತಾಲ್ಲೂಕಿನಲ್ಲಿ ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕುಗಳು ಇವೆ ಆರ್ಥಿಕ ಚಟುವಟಿಕೆಗೆ ಇವು ಸಹಕಾರಿ ಪ್ಲಾಂಟೇಷನ್‍ಗಳಿಗೆ ಸಂಬಂಧಿಸಿದಂತೆ ಕಾರ್ಮಿಕಸಂಘಟನೆಯೂ ಹಲವೆಡೆ ಇದೆ.

	ಈ ತಾಲ್ಲೂಕಿನ ಸರಹದ್ದಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ಮಾರ್ಗ ಇದೆ. ಮೂಡಿಗೆರೆ-ಚಿಕ್ಕಮಗಳೂರು ರಸ್ತೆ. ಮೂಡಿಗೆರೆ-ಸಕಲೇಶಪುರ ರಸ್ತೆ, ಮೂಡಿಗೆರೆ-ಮಾರ್ಕೊನಹಳ್ಳಿ-ಬೇಲೂರು ರಸ್ತೆ, ಮೂಡಿಗೆರೆ-ಕೊಟ್ಟಿಗೆಹಾರ-ಉರುವಿನ ಖಾನ್-ಬಾಳೆ ಹೊನ್ನೂರು ರಸ್ತೆ ಮೂಡಿಗೆರೆ-ಕಳಸ-ಕುದುರೆಮುಖ ರಸ್ತೆ. ಮೂಡಿಗೆರೆ-ದಾರದಹಳ್ಳಿ-ದೇವವೃಂದ ರಸ್ತೆ ಇವು ತಾಲ್ಲೂಕಿನ ಮುಖ್ಯ ಮಾರ್ಗಗಳು.
(ಕೆ.ಆರ್.ಆರ್.)

	ಮಲೆನಾಡಿನಲ್ಲಿ ವಿಶೇಷವಾಗಿರುವ ಸುಗ್ಗಿ ಹಬ್ಬದ ಆಚರಣೆ ಈ ತಾಲ್ಲೂಕಿನಲ್ಲೆಲ್ಲ ಕಂಡುಬರುತ್ತದೆ. ಹಲವು ಗ್ರಾಮಗಳು ಗುಂಪುಗಳೂ ಸೇರಿ ಒಂದು ಸಾವಿರವೆಂದು ಒಟ್ಟಾಗಿ ಈ ಹಬ್ಬ ಆಚರಿಸುತ್ತಾರೆ. ಸುಗ್ಗಿದೇವತೆಗಳು ಪಾರ್ವತಿಯ ಅವತಾರವೆಂದು ಹಬ್ಬದಲ್ಲಿ ಹೆಣ್ಣು ದೇವತೆಗಳನ್ನು ಪೂಜಿಸುತ್ತಾರೆ. ಯುಗಾದಿ ತರುವಾಯ ದೇವವೃಂದದಲ್ಲಿ ನಡೆಯುವ ರಾಮೇಶ್ವರ ರಥೋತ್ಸವ ಈ ನಾಡಿನ ಹಬ್ಬ. ಹಾಗೆಯೆ ಪಲ್ಗುಣಿಯಲ್ಲಿ ಮೂರುಸಾವಿರ ನಾಡ ಜಾತ್ರೆ ನಡೆಯುತ್ತದೆ. ಕಳಸದಲ್ಲಿ ನಡೆಯುವ ಕಳಸೇಶ್ವರಸ್ವಾಮಿ ಜಾತ್ರೆ, ಹೊರನಾಡು ಅನ್ನಪೂರ್ಣೇಶ್ವರಿ ಜಾತ್ರ-ಇವು ತಾಲ್ಲೂಕಿನ ಮುಖ್ಯ ಉತ್ಸವಗಳು. ಈ ತಾಲ್ಲೂಕಿನ ಸುಗ್ಗಿ ಕುಣಿತ, ಕೋಲಾಟ ಪ್ರಸಿದ್ಧ.

	ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಐತಿಹ್ಯಗಳಿವೆ. ಇಲ್ಲಿಯ ಹೇರಿಕೆ ಗ್ರಾಮದ ಸಮೀಪದಲ್ಲಿರುವ ಪಾಂಡವರ ಗುಡ್ಡದಲ್ಲಿ ಹಿಂದೆ ಪಾಂಡವರು ವಾಸಿಸುತ್ತಿದ್ದರೆಂದು ಹೇಳುವುದುಂಟು. ಈ ತಾಲ್ಲೂಕಿನಲ್ಲಿ ಕಳಸ, ಹೊರನಾಡು. ದೇವವೃಂದ ಮೊದಲಾದ ಧಾರ್ಮಿಕ ಕೇಂದ್ರಗಳೂ ಅಂಗಡಿ. ಬಲ್ಲಾಳರಾಯನದುರ್ಗ ಮೊದಲಾದ ಐತಿಹಾಸಿಕ ಸ್ಥಳಗಳೂ ಇವೆ. ಬಲ್ಲಾಳ ರಾಯನದುರ್ಗದಲ್ಲಿ ಹೊಯ್ಸಳರ ಕಾಲದ ಕೋಟೆ ಇದೆ. ಇಲ್ಲಿಯ ಪಶ್ಚಿಮ ಘಟ್ಟದಲ್ಲಿ ಸುಮಾರು 1520 ಮೀ ಎತ್ತರದಲ್ಲಿ ಗುತ್ತಿಹಳ್ಳಿಯ ಬಳಿ ಇರುವ ದೇವರಮನೆ ಭೈರವೇಶ್ವರ ಮತ್ತು ಭೈರಾಪುರದ ಬಳಿಯ ಭೈರವೇಶ್ವರ ದೇವಾಲಯಗಳು ಹೊಯ್ಸಳರ ಕಾಲದವು.

	ಮೂಡಿಗೆರೆ ಹೋಬಳಿ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಕಡೂರು--ಮಂಗಳೂರು ಹೆದ್ದಾರಿಯಲ್ಲಿ ಕಡೂರಿನ ನೈಋತ್ಯಕ್ಕೆ 73 ಕಿಮೀ ದೂರದಲ್ಲೂ ಚಿಕ್ಕಮಗಳೂರಿಗೆ 33 ಕಿಮೀ ದೂರದಲ್ಲೂ ಇದೆ. ಪುರಸಭಾಡಳಿತವಿರುವ ಪಟ್ಟಣ. ಜನಸಂಖ್ಯೆ 8,962 (2001). ಪ್ರೌಢಶಾಲೆಗಳು, ಜೂನಿಯರ್ ಕಾಲೇಜು, ಪ್ರವಾಸಿಮಂದಿರ, ಜನರಲ್ ಆಸ್ಪತ್ರೆ, ಸಾರ್ವಜನಿಕ ಗ್ರಂಥಾಲಯ, ವಾಣಿಜ್ಯ ಬ್ಯಾಂಕುಗಳು, ಪಶುವೈದ್ಯ ಶಾಲೆ ಮೊದಲಾದವು ಇವೆ. ಇಲ್ಲಿಗೆ ಸುಮಾರು ಎರಡೂವರೆ ಕಿಮೀ ದೂರದಲ್ಲಿ ಪ್ರಾದೇಶಿಕ ಏಲಕ್ಕಿ ಸಂಶೋಧನಾ ಕೇಂದ್ರವಿದೆ. ಇಲ್ಲಿ ಹಲವು ಪ್ರಾಚೀನ ಶಾಸನಗಳಿವೆ. ಹಿಂದಿನಿಂದಲೂ ಈ ಊರು ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ಮುಖ್ಯ ಸಂಚಾರಮಾರ್ಗದಲ್ಲಿದ್ದು ಪ್ರಾಮುಖ್ಯ ಪಡೆದಿತ್ತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ